ಮಮತಾ ಆಳ್ವಿಕೆಯನ್ನು ಕೊನೆಗೊಳಿಸಿಯೇ ಸಿದ್ಧ..ಮಗಳ ಸಾವಿಗೆ ನ್ಯಾಯ ಕೋರಿ ಸರ್ಕಾರಕ್ಕೆ ನೇರ ಸವಾಲು ಹಾಕಿದ ಸಂತ್ರಸ್ತೆಯ ತಾಯಿ! | RG Kar Protest

RG Kar Protest
RG Kar Protest
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆರ್‌ಜಿ ಕರ್ (RG Kar Protest) ವೈದ್ಯಕೀಯ ಕಾಲೇಜಿನಲ್ಲಿ ನಡೆದ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ಈಗ ಕಾನೂನು ಹೋರಾಟವಾಗಿ ಉಳಿಯದೇ, ರಾಜಕೀಯ ಸಂಘರ್ಷವಾಗಿ ಮಾರ್ಪಟ್ಟಿದೆ. ತನ್ನ ಮಗಳ ಸಾವಿಗೆ ನ್ಯಾಯ ಕೋರಿ ಬೀದಿಗಿಳಿದಿದ್ದ ಸಂತ್ರಸ್ತೆಯ ತಾಯಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ನೇರ ಸವಾಲು ಹಾಕಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸಂತ್ರಸ್ತೆಯ ತಾಯಿ, ನನ್ನ ಮಗಳ ತನಿಖೆಗೆ ಅಡ್ಡಿಪಡಿಸಿದ ಮತ್ತು ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿದ ಈ ಭ್ರಷ್ಟ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವುದೇ ನನ್ನ ಮೊದಲ ಗುರಿ ಎಂದು ಗುಡುಗಿದ್ದಾರೆ. ಸ್ವತಃ ಬ್ಯಾನರ್ಜಿ ಅವರೇ ಗೃಹ ಖಾತೆಯನ್ನೂ ಹೊಂದಿರುವುದರಿಂದ, ಗೃಹ ಸಚಿವೆಯ ಆಳ್ವಿಕೆಯನ್ನು ಕೊನೆಗೊಳಿಸಲು ತಾವು ಈ ಮಾರ್ಗವನ್ನು ಆರಿಸಿಕೊಂಡಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಉತ್ತರ 24 ಪರಗಣದ ಪಾಣಿಹತಿ ಕ್ಷೇತ್ರದಿಂದ ಅವರು ಕಣಕ್ಕಿಳಿಯುವ ಸಾಧ್ಯತೆಯಿದ್ದು, ಬಿಜೆಪಿಯ ಮೂರನೇ ಪಟ್ಟಿಯಲ್ಲಿ ಅವರ ಹೆಸರು ಅಂತಿಮವಾಗುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
ಬಿಜೆಪಿಯು ಈಗಾಗಲೇ ಕೋಲ್ಕತ್ತಾದ ಮಾಜಿ ಪೊಲೀಸ್ ಆಯುಕ್ತ ರಾಜೇಶ್ ಕುಮಾರ್​ರನ್ನು ಜಗತ್‌ದಳದಿಂದ ಕಣಕ್ಕಿಳಿಸಿದ್ದು, ಈಗ ಸಂತ್ರಸ್ತೆಯ ತಾಯಿಯ ಪ್ರವೇಶವು ಪಕ್ಷಕ್ಕೆ ಹೆಚ್ಚಿನ ನೈತಿಕ ಬಲ ನೀಡಲಿದೆ. ಮತ್ತೊಂದೆಡೆ, ಈ ಬೆಳವಣಿಗೆಯನ್ನು ಕುಟುಂಬದ ವೈಯಕ್ತಿಕ ನಿರ್ಧಾರ ಎಂದು ಕರೆದಿರುವ ಸಿಪಿಐ(ಎಂ) ನಾಯಕ ಮೊಹಮ್ಮದ್ ಸಲೀಂ, ಬಿಜೆಪಿ ಮತ್ತು ಟಿಎಂಸಿ ಎರಡನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ಟಿಎಂಸಿ ಸಾಕ್ಷ್ಯ ನಾಶಪಡಿಸಿದರೆ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೂ ಇಂತಹ ಘಟನೆಗಳು ನಡೆದಿವೆ. ಸತ್ಯವನ್ನು ಹೊರಗೆಡವಲು ಈ ಎರಡೂ ಪಕ್ಷಗಳಿಗೆ ಆಸಕ್ತಿಯಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಘಟನೆಯ ಹಿನ್ನೆಲೆ 

2024 ರ ಆಗಸ್ಟ್​​ನಲ್ಲಿ ನಡೆದ 31 ವರ್ಷದ ವೈದ್ಯೆಯ ಮೇಲಿನ ಘೋರ ಅಪರಾಧ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ವೈದ್ಯರು ಮತ್ತು ನಾಗರಿಕ ಸಮಾಜವು ತಿಂಗಳುಗಟ್ಟಲೆ ನಡೆಸಿದ ಪ್ರತಿಭಟನೆಯು ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಈಗ ಸಂತ್ರಸ್ತೆಯ ಕುಟುಂಬವೇ ನೇರವಾಗಿ ಚುನಾವಣಾ ಕಣಕ್ಕೆ ಇಳಿಯುತ್ತಿರುವುದು 2026ರ ಬಂಗಾಳ ಚುನಾವಣೆ ಕಣವನ್ನು ಮತ್ತಷ್ಟು ರಂಗೇರುವಂತೆ ಮಾಡಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net